ಗುರುವಾರ, ಅಕ್ಟೋಬರ್ 26, 2023

ಸಂಗೀತ ಸೌರಭ

ಸಂಗೀತ ಸೌರಭ

ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು.

ಇಂದಿನಿಂದ ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ಮಾಲಿಕೆಯನ್ನು ಆರಂಭಿಸುತ್ತಿದ್ದೇನೆ.

ಇದೊಂದು ಪಾಕ್ಷಿಕ ಸಂಚಿಕೆಯಾಗಿದ್ದು ಪ್ರತಿ ಹದಿನೈದು ದಿನಗಳಿಗೆ ಒಮ್ಮೆ ಒಂದು ಲೇಖನ ಪ್ರಕಟವಾಗಲಿದೆ.

ಇದರಲ್ಲಿ ದೇಶದ ಸುಪ್ರಸಿದ್ಧ ಕಲಾವಿದರು ತಮ್ಮ ಅನುಭವಗಳನ್ನು ವಿವರಿಸಿದ್ದಾರೆ.  ಅವರ ನುಡಿಗಳನ್ನು ಅಕ್ಷರ ರೂಪದಲ್ಲಿ ಇಲ್ಲಿ ಕಟ್ಟಿಕೊಡಲಾಗಿದೆ. ವಿವಿಧ ಮೂಲಗಳಿಂದ ಸಂಗ್ರಹಿಸಲಾದ ಚಿತ್ರ ಮಾಹಿತಿಗಳು ನಿಮಗೆ ಉಪಯುಕ್ತವಾದೀತೆಂದು ಭಾವಿಸುತ್ತೇನೆ.

ವಂದನೆಗಳು

ಶಂಕರ ಅಜ್ಜಂಪುರ
ಸಂಪಾದಕ
ಸಂಗೀತ ಸೌರಭ ಮಾಲಿಕೆ.

-0-0-0-0-0-0-

ಸಂಗೀತ ಸೌರಭ

ಸಂಚಿಕೆ - 1

ವಿದುಷಿ ಶ್ರೀಮತಿ ಪ್ರಭಾ ಆತ್ರೆ

ಶ್ರೀಮತಿ ಪ್ರಭಾ ಅತ್ರೆ (13 ಸೆಪ್ಟೆಂಬರ್ 1932) ಕಿರಾಣಾ- ಘರಾಣೆಯ ಶ್ರೇಷ್ಠ ಗಾಯಕಿ. ಇವರಿಗೆ ಭಾರತ ಸರ್ಕಾರದ ಎಲ್ಲ ಮೂರು ಪದ್ಮ ಪ್ರಶಸ್ತಿಗಳು ಸಂದಿವೆ.

"ನಮಗೆ ಮೊದಲು ಸ್ವರ ಜ್ಞಾನದ ಅಗತ್ಯವಿದೆ. ಸರಿಯಾದ ಸ್ವರ ಜ್ಞಾನವೇ ಸಂಗೀತದ ಬುನಾದಿ. ಸಂಗೀತ ಕ್ಷೇತ್ರಕ್ಕೆ ಪ್ರವೇಶ ಬಯಸುವ ಯಾರಿಗೂ ನಾನು ಹೇಳುವುದೆಂದರೆ - ಅವರ ಕಿವಿಗಳು ತುಂಬಾ ಚೆನ್ನಾಗಿರಬೇಕು. ಕಲಿಯುವ ಮೊದಲು ಕಿವಿಗಳನ್ನು ಸಿದ್ಧಪಡಿಸಿಕೊಂಡಿರಬೇಕು. ಎಂದರೆ ಕೇಳುವಿಕೆಯೇ ಮುಖ್ಯ ಎಂದು ಅರ್ಥ. ಏನಾಗುತ್ತಿದೆ ಯಾವ ಘಟನೆ ನಡೆಯುತ್ತಿದೆ ಇದರ ಬಗ್ಗೆ ಗಮನಕೊಡಬೇಕಾಗುತ್ತದೆ. ಹಾಗಿದ್ದರೆ ಮಾತ್ರ ನೀವು ಚೆನ್ನಾಗಿ ಕಲಿಯಬಲ್ಲಿರಿ.

ಸಾಧನೆ ಮಾಡುವುದಿದ್ದರೆ ಏಕೆ ಮಾಡಬೇಕು ಹೇಗೆ ಮಾಡಬೇಕು ಎಂಬ ಪರಿಜ್ಞಾನವಿರಬೇಕು. ಹಿಂದಿದ್ದ ಗುರುಕುಲ ಪದ್ಧತಿ ಇಂದು ಇಲ್ಲವಷ್ಟೇ. ಜೀವನ ಶೈಲಿ ಬದಲಾಗಿದೆ. ಗುರುಗಳಿಗೂ ಈಗ ಸಮಯದ ಅಭಾವ. ಹೆಚ್ಚೆಂದರೆ ನಿಮಗಾಗಿ ಅವರು ಒಂದು ಗಂಟೆ ಸಮಯ ನೀಡಬಹುದು.

ಹಾಗಿದ್ದೂ ಇಂದು ನಮಗೆ ಉತ್ತಮ ತಂತ್ರಜ್ಞಾನದ ಬೆಂಬಲವಿದೆ. ಟೇಪ್ ರೆಕಾರ್ಡರ್ ನಂಥ ಸಾಧನಗಳಿವೆ. ನಿಮಗೆ ಉತ್ತಮ ಗ್ರಹಿಕಾಶಕ್ತಿ ಇದ್ದರೆ  ಕೇಳುವಿಕೆಯಿಂದ ನೀವು ನಿಮ್ಮನ್ನು ತಿದ್ದಿಕೊಳ್ಳಬಹುದು. ನಿಮ್ಮ ಸಾಧನೆ ಅಭ್ಯಾಸದ ಧ್ವನಿಮುದ್ರಿಕೆಗಳನ್ನು ನಿಮ್ಮ ಗುರುಗಳಿಗೆ ಕೇಳಿಸಿ, ಅವರ ಅಭಿಪ್ರಾಯ ಪಡೆಯಿರಿ. ಅವರ ಸಲಹೆಗಳನ್ನು ಅನುಸರಿಸಿ. ವಿದ್ಯಾರ್ಥಿಗೆ ವಿನಯವಂತಿಕೆಯಂತೂ ಇರಲೇಬೇಕು''.

- ವಿದುಷಿ ಶ್ರೀಮತಿ ಪ್ರಭಾ ಆತ್ರೆ
       -0-0-0-0-0-0-0-೦-೦-

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ